ನೂ-
	ಆಫ್ರಿಕದ ಟ್ಯಾಂಗನೀಕ ಮತ್ತು ಕೀನ್ಯಗಳ ದಕ್ಷಿಣದಲ್ಲಿ ಕಂಡುಬರುವ ವನ್ಯಪ್ರಾಣಿ. ಆರ್ಟಿಯೊಡ್ಯಾಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ (ಮೆಲಕು ಹಾಕುವ ಪ್ರಾಣಿಗಳ ಗುಂಪು) ಸೇರಿವೆ. ವೈಲ್ಡ್‍ಬೀಸ್ಟ್ ಪರ್ಯಾಯನಾಮ. ಕಾನೊಕೀಟಸ್ ಟಾರಿನಸ್ ಇದರ ಶಾಸ್ತ್ರೀಯ ನಾಮ. ಸರಿಸುಮಾರು ಕುದುರೆಯಂಥ ಮೈಕಟ್ಟುಳ್ಳ ಪ್ರಾಣಿ ಇದು. ದೇಹದ ಉದ್ದ 1.5-2 ಮೀ. ಭುಜದ ಬಳಿಯ ಎತ್ತರ 1-1.3 ಮೀ. ಪ್ರೌಡವಯಸ್ಸಿನ ಗಂಡಿನ ತೂಕ 230-275 ಕೆಜಿ. ದೇಹದ ಬಣ್ಣ ಬೂದುಬೆಳ್ಳಿ. ಕತ್ತು, ಭುಜಗಳ ಬಳಿ ಕಂದು ಪಟ್ಟಿಗಳುಂಟು. ಮುಖ, ಅಯಾಲು, ಗಡ್ಡ ಮತ್ತು ಬಾಲದ ತುದಿಯಲ್ಲಿ ಕಪ್ಪು ಕೂದಲುಗಳಿವೆ. ಗಂಡುಹೆಣ್ಣುಗಳೆರಡರಲ್ಲೂ ಕೊಂಬು ಇವೆ. ಆಕಳು ಎಮ್ಮೆಗಳಂತೆ  ಇದೂ ಕೂಡ ಇಗ್ಗೊರಸು ಪ್ರಾಣಿ.

	ನೂ 5-5 ಪ್ರಾಣಿಗಳನ್ನು ಒಳಗೊಂಡ ಗುಂಪುಗಳಲ್ಲಿ ಸಂಚರಿಸುತ್ತದೆ. ಕೆಲವೊಮ್ಮೆ ಹಿಂಡಿನಲ್ಲಿ 100ಕ್ಕೂ ಮೇಲ್ಪಟ್ಟು ಪ್ರಾಣಿಗಳಿರುವುದುಂಟು. ಹಿಂಡು ಸಣ್ಣದಾಗಿದ್ದರೆ ಂಇದಕ್ಕೆ ಮುಖಂಡ ಬಲಶಾಲಿಯಾದ ಗಂಡು. ಹಿಂಡು ದೊಡ್ದದಾಗಿದ್ದರೆ ಮುಖಂಡತ್ವ ಹಲವಾರು ಗಂಡು ಪ್ರಾಣಿಗಳಿರಬಹುದು. ಮುದಿಗಂಡುಗಳು ಗುಂಪನ್ನು ರಚಿಸಿಕೊಂಡೊ ಇರುವುದುಂಟು. ನೂಗೆ ಹುಲ್ಲು ಬೆಳೆದಿರುವ ಬಯಲು ನೆಲ ಬಲು ಅಚ್ಚುಮೆಚ್ಚು. ಅಂತೆಯೇ ಸನಿಹದಲ್ಲಿ ನೀರಿನ ಆಸರೆಯೂ ಇರಬೇಕು. ಮನುಷ್ಯರೇನಾದರೂ ನೂ ಪ್ರಾಣಿಗಳ  ಹತ್ತಿರ ಹೋದರೆ, ಅವು ನೆಗೆದಾಡುವುದು, ನೆಲವನ್ನು ಗೊರಸಿನಿಂದ ಕೆರೆಯುವುದು, ಕೊಂಬಿನಿಂದ ಮಣ್ಣನ್ನು ಗೋರುವುದು, ಬಾಲ ಬಡಿಯುವುದು ಮುಂತಾದ ವಿಚಿತ್ರ ನಡವಳಿಕೆಗಳನ್ನು ಆರಂಭಿಸುವುವು. ಬಲು ಹತ್ತಿರಕ್ಕೆ (ಸುಮಾರು 500 ಮೀಟರ್) ಸಾರಿದರೆ ಹೂಂಕರಿಸಿ ಕೊಂಚ ದೂರ ಓಡಿ, ಶತ್ರುವಿಗೆದುರಾಗಿ ತಿರುಗಿ ಮತ್ತೆ ತಮ್ಮ ವಿಚಿತ್ರ ಚಟುವಟಿಕೆಯನ್ನು ಆರಂಭಿಸುವುವು. ನೂಗಳ ಆಹಾರ ಸೇವನೆಯ ಕಾಲ ಬೆಳಿಗ್ಗೆ ಮತ್ತು ಸಂಜೆ. ಮಧ್ಯಾಹ್ನದ ಬಿಸಿಲಿನಲ್ಲಿ ಮರಗಳ ನೆರಳಿನಲ್ಲಿ ವಿಶ್ರಮಿಸುತ್ತವೆ.

	ಗಂಡು-ಹೆಣ್ಣುಗಳು ಕೂಡುವ ಕಾಲ ಜೂನ್. 8-9 ತಿಂಗಳ ಗರ್ಭಾವಧಿಯ ಬಳಿಕ ಒಂದೇ ಒಂದು ಮರಿ ಹುಟ್ಟುತ್ತದೆ. ಮರಿ ಒಂದು ವಾರದ ಅನಂತರ ಹುಲ್ಲು ತಿನ್ನಲು ಆರಂಭಿಸುತ್ತಾದರೂ 7-8 ತಿಂಗಳವರೆಗೂ ತಾಯ ಹಾಲು ಕುಡಿಯುತ್ತದೆ. ನೂವಿನ ಆಯಸ್ಸು ಸುಮಾರು 16 ವರ್ಷಗಳು. ಇದರ ಮಾಂಸ ಗಟ್ಟಿ ಹಾಗೂ ಒರಟು. ತ್ವಚೆಯಿಂದ ಒಳ್ಳೆಯ ಚರ್ಮವನ್ನು ಪಡೆಯಬಹುದು. ಇದರ ಬಾಲದಿಂದ ಚವರಿ ತಯಾರಿಸುವುದಿದೆ.
(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ